Psalms 110
ಯೆಹೋವನಿಂದ ಆರಿಸಲ್ಪಟ್ಟ ಚೀಯೋನಿನ ಅರಸ
ದಾವೀದನ ಕೀರ್ತನೆ.
(ಕೀರ್ತ. 2; 21)
1ಯೆಹೋವನು ನನ್ನ ಒಡೆಯನಿಗೆ,<<ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ,
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು>> ಎಂದು ನುಡಿದನು.
2 ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು;
ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ,
ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.
ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು,
ಉದಯಕಾಲದ ಇಬ್ಬನಿಯಂತಿರುವರು.
4 <<ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ>> ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ;
ಪಶ್ಚಾತ್ತಾಪಡುವುದಿಲ್ಲ.
5 ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ ರಾಜರನ್ನು ಖಂಡಿಸುವನು.
6 ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ,
ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ,
ಹೆಣಗಳಿಂದ ಅದನ್ನು ತುಂಬಿಸುವನು.
7 ಒಡೆಯನು ದಾರಿಯಲ್ಲಿ ಹಳ್ಳದ ನೀರನ್ನು ಕುಡಿದು ತಲೆಯೆತ್ತುವನು.
Copyright information for
KanULB