Psalms 83
ಇಸ್ರಾಯೇಲ್ ವಿರೋಧಿಗಳ ಸೋಲಿಗಾಗಿ ಪ್ರಾರ್ಥನೆ
ಆಸಾಫನ ಕೀರ್ತನೆ; ಗೀತೆ.
1ದೇವರೇ, ಸುಮ್ಮನಿರಬೇಡ!ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ.
2 ನೋಡು, ನಿನ್ನ ಶತ್ರುಗಳು ಘೋಷಿಸುತ್ತಿದ್ದಾರೆ;
ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ.
3 ಅವರು ನಿನ್ನ ಪ್ರಜೆಗಳಿಗೆ ವಿರುದ್ಧವಾಗಿ ಒಳಸಂಚುಮಾಡಿ, ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ,
4 <<ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ,
ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆ,
ಅವರನ್ನು ಸಂಹರಿಸೋಣ>> ಅಂದುಕೊಳ್ಳುತ್ತಾರೆ.
5 ಎದೋಮ್ಯರ ಮತ್ತು ಇಷ್ಮಾಯೇಲರ ಪಾಳೆಯಗಳವರು,
ಮೋವಾಬ್ಯರು, ಹಗ್ರೀಯರು,
6 ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಫಿಲಿಷ್ಟಿಯರು, ತೂರ್ ಸಂಸ್ಥಾನದವರು,
7 ಇವರೆಲ್ಲಾ ಏಕಮನಸ್ಸಿನಿಂದ ಕೂಡಿ,
ನಿನಗೆ ವಿರುದ್ಧವಾಗಿ ಒಳಸಂಚು ಮಾಡುತ್ತಾರಲ್ಲಾ;
8 ಅಶ್ಶುರ್ಯರೂ ಇವರೊಡನೆ ಕೂಡಿಕೊಂಡು, ಲೋಟನ ವಂಶದವರಿಗೆ ಭುಜಬಲವಾಗಿದ್ದಾರೆ.
ಸೆಲಾ
9 ನೀನು ಮಿದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್ ಹಳ್ಳದ ಬಳಿಯಲ್ಲಿ ಸೀಸೆರ್, ಯಾಬೀನ್ ಎಂಬುವವರಿಗೆ ಮಾಡಿದಂತೆ,
ಇವರಿಗೂ ಮಾಡು.
10 ಅವರು ಎಂದೋರಿನಲ್ಲಿ ವಧಿಸಲ್ಪಟ್ಟು,
ಹೊಲದ ಗೊಬ್ಬರವಾಗಿ ಹೋದರಲ್ಲಾ.
11 ಓರೇಬ್ ಮತ್ತು ಜೇಬ್ ಎಂಬವರ ಗತಿಯು, ಇವರ ಶ್ರೀಮಂತರಿಗೂ ಸಂಭವಿಸಲಿ;
ಜೇಬಹ ಮತ್ತು ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ.
12 ಅವರು <<ದೇವರು ಅವರಿಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುತ್ತೇವೆ>>
ಅಂದುಕೊಳ್ಳುತ್ತಾರಲ್ಲಾ.
13 ನನ್ನ ದೇವರೇ, ಅವರನ್ನು ಸುಂಟರ ಗಾಳಿಯಲ್ಲಿ ಸುತ್ತಾಡುವ ಧೂಳಿನಂತೆಯೂ, ಹಾರಿಹೋಗುವ ಹೊಟ್ಟಿನಂತೆಯೂ ಮಾಡು.
14 ನೀನು ಕಾಡನ್ನು ಸುಟ್ಟುಬಿಡುವ ಬೆಂಕಿಯಂತೆಯೂ,
ಪರ್ವತಗಳನ್ನು ದಹಿಸಿಬಿಡುವ ಜ್ವಾಲೆಯಂತೆಯೂ ಇದ್ದು,
15 ನಿನ್ನ ಸುಂಟರಗಾಳಿಯಿಂದ ಅವರನ್ನು ಬೆನ್ನಟ್ಟು;
ತುಫಾನಿನಿಂದ ಅವರನ್ನು ಕಳವಳಗೊಳಿಸು.
16 ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು.
17 ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ;
ಅಪಮಾನದಿಂದ ನಾಶವಾಗಲಿ.
18 ಆಗ ಯೆಹೋವನ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.
Copyright information for
KanULB